ಮಾನಸಾಂತರ
ಕ್ರೈಸ್ತ ಧರ್ಮದಲ್ಲಿ ಈ ಪದಕ್ಕೆ ವಿಶಿಷ್ಟ ಅರ್ಥವಿದೆ. ಮನಸ್ಸನ್ನು ದೇವರ ಅಥವಾ ಕರ್ತನ ಕಡೆಗೆ ತಿರುಗಿಸಿಕೊಳ್ಳುವುದನ್ನು ಈ ಹೆಸರಿನಿಂದ ಕರೆಯಲಾಗಿದೆ. ಇದನ್ನು ಪಶ್ಚಾತ್ತಾಪ (ರಿಪೆನ್‍ಟೆನ್ಸ್) ಎಂದೂ ಕರೆಯುತ್ತಾರೆ. ಮಾನವ ತಾನು ಮಾಡಿದ ಪಾಪಗಳ ರಾಶಿಯನ್ನು ಮನಸ್ಸಿಗೆ ತಂದುಕೊಂಡು ಅವುಗಳ ವಿಷಯದಲ್ಲಿ ದುಃಖಿತನಾಗಿ ಮುಂದಾದರೂ ಪಾಪ ಮಾಡುವುದನ್ನು ಬಿಟ್ಟು ದೇವರ ಕಡೆಗೆ ತನ್ನನ್ನು ತಿರುಗಿಸಿಕೊಳ್ಳುವುದು ಪಶ್ಚಾತ್ತಾಪದ ಮೊದಲ ಮೆಟ್ಟಲಾಗಿದೆ. ಕ್ರಿಸ್ತ ಆರಂಭದಿಂದಲೇ ಮಾನಸಾಂತರ ಕುರಿತು ಉಪದೇಶಿಸಿದ. 

ನೀತಿಗೆ ವಿರೋಧವಾದ ಕಾರ್ಯಗಳನ್ನು ಬಿಟ್ಟು ಸತ್ಯವನ್ನು ಅವಲಂಬಿಸುವುದು, ಕತ್ತಲೆಯಿಂದ ಬೆಳಕಿನತ್ತ ಹೋಗುವುದು, ಹೊಸ ಜೀವನದಿಂದ ಜೀವಿಸುವುದು, ಮರಣದಿಂದ ಪಾರಾಗಿ ಮೋಕ್ಷ ಸಂಪಾದಿಸುವುದು-ಈ ಸಿದ್ಧಿಗೆ ಬರುವುದು ಸುಲಭವಲ್ಲ. ಅದು ಒಬ್ಬ ವ್ಯಕ್ತಿಯನ್ನು ಒಲಿಸುವುದರಿಂದ ಅಂದರೆ ಯೇಸುಕ್ರಿಸ್ತನ ಒಲವನ್ನು ಸಂಪಾದಿಸುವುದರಿಂದ ಮಾತ್ರ ಸಾಧ್ಯ. ಮಾನಸಾಂತರಕ್ಕೆ ಒಳಪಟ್ಟವನ ಜೀವನ ಕ್ರಿಸ್ತನ ಜೀವನ, ಮರಣ, ಪುನರುತ್ಥಾನ ಮತ್ತು ಆತನ ಅಧಿಕಾರಗಳಿಗೆ ಅನುಸಾರವಾಗಿ ಕ್ರಮಪಡಿಸಲ್ಪಡುತ್ತದೆ.
(ಎಚ್.ಡಿ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ